iasjnana
Essay
ಭಾರತದಲ್ಲಿ ಚುನಾವಣೆಗಳು
ಸುದೀರ್ಘ ಕಾಲದಿಂದಲೂ ಚುನಾವಣೆಯಲ್ಲಿ ಗೆಲುವಿಗಾಗಿ ಮತ್ತು ಮತದಾರರ ಮೇಲೆ ಪ್ರಭಾವ ಬೀರುವುದಕ್ಕಾಗಿ ವ್ಯಾಪಕ ಹಣಬಲ ಬಳಕೆಗೆ ಭಾರತದ ರಾಜಕೀಯಾ ವಲಯ ಸಾಕ್ಷಿಯಾಗುತ್ತಾ ಬಂದಿದೆ. ಭಾರತದಲ್ಲಿ ಚುನಾವಣೆಗಳು ಐದು ವರ್ಷಕ್ಕೊಮ್ಮೆ ಬರುವ ನಾಡಿನ ಬೃಹತ್ ಉತ್ಸವಗಳು. ಜನರ ಆಕಾಂಕ್ಷೆಗಳು, ಆತಂಕಗಳು, ಆಸಕ್ತಿಗಳು ಬಲವರ್ಧನೆಯಾಗುವ ಮತ್ತು ತೀವ್ರ ರೂಪ ತಾಳುವ ಜನಮನೋತ್ಸವವಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1947ಕ್ಕೆ ಮೊದಲು, ಭಾರತದ್ಯಾಂತ ಆಳ್ವಿಕೆ ನಡೆಸುತ್ತಿದ್ದವರು ರಾಜಮನೆತನದವರು.ಇಲ್ಲಿ ಅಧಿಕಾರ ವಂಶಪಾರಂಪಾರಿಕವಾಗಿದ್ದಿತು. ಒಮ್ಮೆ ಅಧಿಕಾರ ಸ್ವೀಕರಿಸಿದರೆ ತಲೆಮಾರುಗಳವರಿಗೆ, ಆ ವಂಶಸ್ಧರೇ ಆಳ್ವಿಕೆದಾರರು. ಯುದ್ಧಗಳ ಮುಖೇನ ಮತ್ತೊಬ್ಬ ಹೊಸ ರಾಜ, ಹೊಸ ಆಳ್ವಿಕೆ ಅಸ್ತಿತ್ವಕ್ಕೆ ಬರುತ್ತಲಿತ್ತು. ದೇಶವೆಂಬ ಚೌಕಟ್ಟಿಲ್ಲದ ದೊಡ್ಡ ಪ್ರದೇಶದಲ್ಲಿ ಹಲವಾರು ಸಾಮಂತ, ಧೀಮಂತ ರಾಜರುಗಳು ತಮ್ಮದೇ ಪ್ರದೇಶಗಳಲ್ಲಿ ಬಲಾಢ್ಯರಾಗಿ ಆಳುತ್ತಿದ್ದರು. ಅಲ್ಲಲ್ಲಿ ಅತಿ ಸಣ್ಣ ಪ್ರಾದೇಶಿಗಳಿಗೂ ಕೂಡ ಪಾಳೇಗಾರರು ಆಳ್ವಿಕೆ ನಡೆಸುತಿದ್ದರು. ಎಲ್ಲ ರಾಜರುಗಳು ಅಥವಾ ಆಳ್ವಿಕೆದಾರರ ಉದ್ದೇಶ ಪ್ರಜಾಪಾಲನೆಯೇ ಆಗಿದ್ದಿತು. ನಂತರ ಬ್ರಿಟಿಷ್ ಆಳ್ವಿಕೆ “ಭಾರತ” ಎಂಬ ಕಟ್ಟನ್ನು ಒದಗಿಸಿತು. ಯಾರನ್ನು ಆಳ್ವಿಕೆದಾರರಾಗಿಸಿಬೇಕೆನ್ನುವ ಪ್ರಶ್ನೆಗೆ ಉತ್ತರ ಪ್ರಜೆಯೇ ಪ್ರಭು ಎಂದಾಗಿತ್ತು. ಭಾರತದ “ಉಕ್ಕಿನ-ಮನುಷ್ಯ” ರೆಂದೇ ಖ್ಯಾತಿಯಾದ ಸರ್ದಾರ್-ವಲ್ಲಭ-ಭಾಯಿ-ಪಟೇಲ್‍ರವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ, ಎಲ್ಲಾ ರಾಜಮನೆತನಗಳ ಸಹಿಯನ್ನು ಒಪ್ಪಂದದ-ಕರಾರಿಗೆ ಪಡೆದು ಭಾರತ ಎಂಬ ಭೌಗೋಳಿಕ ಪ್ರಾಂತ್ಯದ ರಾಜಕೀಯ ಭವಿಷ್ಯವನ್ನು ರೂಪಿಸಿದರು.
ಭಾರತದಲ್ಲಿ ಪ್ರಜಾಸಕ್ತಿ, ಪುರಾಣಕಾಲದಿಂದಲೂ, ಮಹಾಭಾರತ, ರಾಮಾಯಣದಲ್ಲಿ ಉಲ್ಲೇಖವಾದಂತಯೂ, ನಂತರದ ಇತಿಹಾಸದ ಚಾಣಕ್ಯ ನೀತಿಯಲ್ಲಿಯೂ ನಿರೂಪಿತವಾಗಿದೆ. ಆದರೆ ಚುನಾವಣೆಗಳೆಂಬ ಅಧಿಕೃತ ಆಳ್ವಿಕೆದಾರನ ಆಯ್ಕೆ ಪ್ರಕ್ರಿಯೆಗಳು ಆರಂಭಗೊಂಡಿದ್ದು ಆಧುನಿಕ ಭಾರತದಲ್ಲಿ. 1947ಕ್ಕೆ “ಭಾರತ” ಎಂದು ಗುರುತಿಸಿಕೊಳ್ಳುವ ಮೊದಲೇ, ಬ್ರಿಟಿಷ್ ಆಳ್ವಿಕೆಯಲ್ಲೇ ಹಲವು ಜನಸಾಮಾನ್ಯನ ಪಾಲ್ಗೊಳ್ಳುವಿಕೆಯನ್ನು “ಚುನಾವಣೆ” ಎಂಬ ಸಂದರ್ಭದಲ್ಲಿ ಪ್ರಕ್ರಿಯೆಯಾಗಿ ಪ್ರಯೋಗಿಸಲಾಗಿತ್ತು. 1947ರ ಸ್ವಾತಂತ್ರ ಈ ನಡೆಗೆ ಶಾಶ್ವತ ಅಸ್ತಿತ್ವ ಒದಗಿಸಿತು. ಭಾರತದ ಸಂವಿಧಾನ ರಚಿತವಾಗಿ, ಅಂಗೀಕೃತವಾಗಿ , ಜಾರಿಗೆ ಬಂದದ್ದು 1950ರ ಜನವರಿ 26ರಂದು. ಭಾರತದ ಮೊದಲ ಸಾರ್ವತ್ರ್ರಿಕ ಚುನಾವಣೆಗಳು ಜರುಗಿದ್ದು 1951-52ರಲ್ಲಿ, 1947ರಿಂದ 1952ರಲ್ಲಿ ಪ್ರಜಾ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರಿಗೆ, ಭಾರತದ ಸಂವಿಧಾನಾತ್ಮಕ ರಚನಾ ಸಭೆ ಪ್ರಜಾಪಾಲನೆಯ ಹೊಣೆ ಮತ್ತು ಅಧಿಕಾರ ವಹಿಸಿತ್ತು. 395ವಿಧಿಗಳನ್ನೊಳಗೊಂಡು ರಚಿತವಾದ ಭಾರತ ಸಂವಿಧಾನದ 324ನೇ ವಿಧಿ ಚನಾವಣೆಗಳ ಬಗೆಗಿನ ವಿವರಣೆ ನೀಡುತ್ತದೆ.
ಭಾರತದಲ್ಲಿ 2ವಿಧದ ಚುನಾವಣೆಗಳು ನಡೆಯುತ್ತವೆ ಪ್ರತ್ಯಕ್ಷ ಮತ್ತು ಪರೋಕ್ಷ ಚನಾವಣೆಗಳಲ್ಲಿ ಜನಸಾಮಾನ್ಯರು ನೇರವಾಗಿ ಭಾಗಿಗಳಾಗುತ್ತಾರೆ. ಮತ ಚಲಾಯಿಸಿ ತಮ್ಮ ನಾಯಕರನ್ನು ಆರಿಸಿಕೊಳ್ಳುತ್ತಾರೆ. ಪರೋಕ್ಷ ಚುನಾವಣೆಗಳಲ್ಲಿ, ಜನಪ್ರತಿನಿಧಿಗಳು ಉನ್ನತ ಸ್ಥಾನದ ನಾಯಕರನ್ನು ಆರಿಸುತ್ತಾರೆ.ಭಾರತದಲ್ಲಿ ಸಣ್ಣ ಪ್ರದೇಶಗಳಿಂದ ಆರಂಭವಾಗುವ ಪ್ರಾತಿನಿಧ್ಯ ದೇಶವ್ಯಾಪಿಯಾಗುತ್ತದೆ; ಅಂದರೆ ಇಲ್ಲಿ ಭಾಗಿಯಾಗುವ ಸಂಸ್ಥೆಗಳೆಂದರೆ ಗ್ರಾಮ-ಪಂಚಾಯತಿ, ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಎಂದು ಸ್ಥೂಲವಾಗಿ ಹೇಳಬಹುದು.ಇದರೊಡನೆ ಹಲವಾರು ಸಂವಿಧಾನಾತ್ಮಕ ಹಾಗು ಅಸಂವಿಧಾನಾತ್ಮಕ ಸಂಸ್ಥೆಗಳು ಆಡಳಿತಾತ್ಮಕ ಉದ್ದೇಶಗಳಿಗೆ ಹಲವಾರು ಸ್ಥರಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಭಾರತದಲ್ಲಿ ಚುನಾವಣೆಗಳು “ಜನ-ಪ್ರಾತಿನಿಧ್ಯ-ಕಾಯ್ದೆ-1950-51” ರ ಅನುಸಾರ ಜರುಗುತ್ತವೆ.
ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ್ಯ ಪಡೆಯುವುದಕ್ಕೆಂದು ರೂಪುಗೊಂಡ ಕಾಂಗ್ರೆಸ್ ಸಂಘಟನೆ, ನಂತರದಲ್ಲಿ ಪಕ್ಷವಾಗಿ ಪರಿವರ್ತನೆಯಾಯಿತು. ಪಕ್ಷ ಎನ್ನುವುದರ ಮೂಲಗುಣಲಕ್ಷಣಗಳು ಏನಂದರೆ ಒಂದು ಜನ ಸುಮೂಹ ಏಕ ರೀತಿಯ ತತ್ವಗಳನ್ನು ಹೊಂದಿದ್ದು, ಅವನ್ನು ಜಾರಿಗೊಳಿಸುವಾಗ ನಿಯಮಗಳನ್ನು ರಚಿಸಿ, ಪಾಲಿಸಿ, ಎಲ್ಲರೂ ಒಪ್ಪಿ, ಅದರತ್ತ ಶ್ರಮಿಸುವುದೇ ಧ್ಯೇಯವಾಗಿಸಿಕೊಂಡು, ರಾಷ್ಟ್ರೀಯ ಹಾಗು ಪ್ರಜಾಹಿತಾಸಕ್ತಿಯತ್ತ ನಡೆಯುವುದು ಎಂದು. ಈ ಪಕ್ಷ ಅಧಿಕಾರ ವಹಿಸಿವುದು ಶಾಂತಿಯುತ ಮಾರ್ಗದಲ್ಲಿ ಸಂವಿಧಾನದ ನಿರ್ದೇಶನದನ್ವಯ.ಈ ಪಕ್ಷವನ್ನು ಗುರುತಿಸಿ, ಆಧಿಕೃತಗೊಳಿಸುವ ಅಧಿಕಾರ ಚುನಾವಣೆ ಆಯೋಗಕ್ಕೆ ಇರುವುದು.ಸಂವಿಧಾನದ 324ನೇ ವಿಧಿಯ ಅನುಸಾರ ರೂಪಿತವಾದ 1950 ಮತ್ತು 1951ರ ಜನಪ್ರತಿನಿಧಿ-ಕಾಯ್ದೆ ಮತ್ತು 2002ರ ಡಿಲಿಮಿಟೇಷನ್-ಕಾಯ್ದೆಂ ಅನುಸಾರ ಕಾರ್ಯ ನಿರ್ವಹಿಸುತ್ತಿದೆ.
ಚುನಾವಣೆ ಆಯೋಗದಲ್ಲಿ ಒಬ್ಬರು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರುಗಳು ಇರುತ್ತಾರೆ . ಮೂರು ಸದಸ್ಯರುಗಳ ಈ ಸಂಸ್ಥೆ, ಚುನಾವಣೆಯ ಸರ್ವ ಜವಾಬ್ದಾರಿ ಮತ್ತು ಅಧಿಕಾರ ಹೊಂದಿರುತ್ತದೆ. ಪಕ್ಷವನ್ನು ಗುರುತಿಸಿ, ಚಿಹ್ನೆ ಅಂಗೀಕರಿಸುವುದರಿಂದ ಮೊದಲುಗೊಂಡು, ಚುನಾವಣೆ ಘೋಷಿಸಿ, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಫಲಿತಾಂಶ ಪ್ರಕಟಗೊಳ್ಳುವವರೆಗೆ ಚುನಾವಣಾ ಆಯೋಗವೇ ಹೊಣೆಯಾಗಿರುತ್ತದೆ. ಚುನಾವಣೆಗಳ ವಿವಾದಗಳೇನಿದ್ದರೂ ಸಹ ಆಯೋಗವೇ ಬಗಹರಿಸಬೇಕು. ರಾಷ್ಟ್ರಪತಿ ಹಾಗು ಉಪರಾಷ್ಟ್ರಪತಿ ಚುನಾವಣೆಯ ಹೊಣೆಯು ಚುನಾವಣೆ ಆಯೋಗಕ್ಕೆ ಇರುವುದು.ಈ ಎರಡು ಸ್ಥಾನಗಳ ವಿವಾದಗಳು ಮಾತ್ರ ಸರ್ವೋಚ್ಛ ನ್ಯಾಯಾಲಯ ಇತ್ಯರ್ಥಿಸಬೇಕು. 1968ರ ಕಾಯ್ದೆ ಅನುಸಾರ ಚುನಾವಣೆ ಆಯೋಗ, ಚುನಾವಣಾ ಗುರುತುಗಳನ್ನು ಆಂಗೀಕರಿಸಿ ಚಿಹ್ನೆಗಳನ್ನು ನೀಡಿ, ಪಕ್ಷಗಳನ್ನು ನಮೂದು ಮಾಡುತ್ತದೆ. ಅಂತೆಯೇ ಒಂದು ಭೌಗೋಳಿಕ ಕ್ಷೇತ್ರಕ್ಕೆ ಎಲ್ಲ ನಿರ್ಧರಿಸಿ ಕ್ಷೇತ್ರಗಳೆಂದು ಗುರುತಿಸುತ್ತದೆ. ಚುನಾವಣೆಗೆಂದು ಮಾಡುವ ವೆಚ್ಚದ ಮೇಲಿನ ನಿಯಂತ್ರಣ, ಪ್ರಕಟಣೆಗಳ ಅವಧಿ, ವ್ಯಾಪ್ತಿಯೂ ಕೂಡ ಚುನಾವಣಾ ಆಯೋಗವೇ ನಿಯಂತ್ರಿಸುತ್ತದೆ. ಪ್ರಚಾರ ನಿಯಮಗಳು ಮತ್ತು ರೇಖೆಗಳನ್ನೂ ಎಳೆಯುವುದು ಆಯೋಗವೇ.
ಮತ ಚಲಾಯಿಸುವ ಪ್ರಜೆಗಳು, ಭಾರತದ ಸಂವಿಧಾನದಡಿಯಲ್ಲಿ ಪ್ರಜಾಪ್ರಭುತ್ವದ ಕಟ್ಟಳೆಯ ಅನುಸಾರ, ಸಾರ್ವತ್ರ್ರಿಕ ವಯಸ್ಕ ಮತದಾನದ ಮೂಲಕ ಪ್ರತಿನಿಧಿಗಳನ್ನು ಆರಿಸುತ್ತಾರೆ. ಭಾರತದಲ್ಲಿ 18ವರ್ಷಕ್ಕಿಂತ ಮೇಲ್ಪಟ್ಟ ಪ್ರಜೆ, ಮತ ಚಲಾಯಿಸಲು ಅರ್ಹನಾಗುತ್ತಾನೆ.ಯಾವುದೇ ರೀತಿಯ, ಅಂದರೆ ಜಾತಿ, ಲಿಂಗ, ಧರ್ಮ, ಆದಾಯದ ಬೇಧವಿಲ್ಲದೆ ಮತ ಚಲಾಯಿಸುವ ಹಕ್ಕುದಾರನಾಗುತ್ತಾನೆ. ಪ್ರಜಾಪ್ರಭುತ್ವದ ತತ್ವಗಳ ಅನುಕೂಲಗಳೆಂದರೆ ಬೇದಭಾವವಿಲ್ಲದೆ ಪ್ರಜೆಯೇ ಪ್ರಭುವಾಗುತ್ತಾನೆ ಮತ್ತು ಸರ್ಕಾರಗಳು ಜನಸಾಮಾನ್ಯನಿಗೆ ಹೊಣೆಯಾಗಬೇಕು.
ಶಾಂತಿಯುತವಾಗಿ ನಡೆಯಬೇಕಾದ ನಾಯಕತ್ವದ ಆಯ್ಕೆ ಪ್ರಕ್ರಿಯೇ ಚುನಾವಣೆ. ಇತ್ತೀಚಿನ ದಿನಗಳಲ್ಲಿ ಚುನಾವಣೆ ಎಂಬುವುದು ದುಷ್ಕೃತ್ಯಗಳನ್ನು ಅಧಿಕೃತಗೊಳಿಸುವ ಕ್ರಿಯೆಯಾಗಿಬಿಟ್ಟಿದೆ. ಹಲವಾರು ಪಕ್ಷಗಳು, ಅಧಿಕಾರ ಹಾಗು ಅನೈತಿಕ ಸಂಪತ್ತಿಗಾಗಿ ನಡೆಸುವ ಪೈಪೋಟಿಯಾಗಿದೆ. ದೇಹಬಲ ಮತ್ತು ಹಣಬಲವಿದ್ದವನೇ ನಾಯಕ ಎಂಬ ದುಸ್ಥಿತಿಗೆ ಭಾರತ ತಲುಪಿಬಿಟ್ಟಿದೆ. ಸ್ವತಂತ್ರ ಅಭ್ಯರ್ಥಿಗಳೂ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಗೆದ್ದ ನಂತರ ಹಣಕ್ಕಾಗಿ ತಮ್ಮನ್ನು ತಾವೇ ಅತ್ಯಧಿಕ ಹಣ ನೀಡುವ ಪಕ್ಷಕ್ಕೆ ಮಾರಿಕೊಂಡುಬಿಡುತ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವೇ ಸರಿ. ಹಣದ ಹೊಳೆ ಹರಿಸಿ, ಆಮಿಷಗಳೊಡ್ಡ್ಡಿ, ಸುಳ್ಳು ಆಶ್ವಾಸನೆಗಳನ್ನಿತ್ತು ಅಧಿಕಾರಕ್ಕೆ ಬರುತ್ತಿರುವ ಪಕ್ಷಗಳು ರಾಷ್ಟ್ರ ಅಥವಾ ಪ್ರಜಾಹಿತಾಸಕ್ತಿಗಿಂತ ತಮ್ಮ ಪಟ್ಟ ಭದ್ರತೆಯಲ್ಲಿಯೇ ಕಾಲ ಕಳೆದು ಬಿಡುತ್ತಾರೆ. ಪ್ರಚಾರದ ವೇಳೆಯಲ್ಲಿ ಆರೋಪ- ಪ್ರತ್ಯಾರೋಪಗಳನ್ನು ಮಾಡುತ್ತಾ ಸಾಗುತ್ತಾರಾಗಲಿ, ಸಾಧನೆಯ ಪ್ರತಿರೂಪಗಳನ್ನು ಕಾರ್ಯರೂಪದಲ್ಲಿ ಪ್ರದರ್ಶಿಸುವ ನಿದರ್ಶನಗಳು ಇಲ್ಲದಿರುವುದು ಶೋಚನೀಯ.
ರಹಸ್ಯ ಮತ ಚಲಾವಣೆ ಸಾಗುತ್ತಾದರೂ ಊಹಿಸಿದ ಫಲಿತಾಂಶಗಳು ಹೊರಬರುವುದಿಲ್ಲ. ಕ್ಷೇತ್ರಕ್ಕೆ ಅಭ್ಯರ್ಥಿಯ ಆಯ್ಕೆ, ಪಕ್ಷದ ಪ್ರತಿನಿಧಿಯಾಗಿ ಎಂಬಲ್ಲಿ ಆರಂಭಗೊಂಡು, ಐದು ವರ್ಷಗಳ ಅಧಿಕಾರಾವಧಿ ಮುಗಿಯುವವರೆಗೂ ಭ್ರಷ್ಟಾಚಾರದ ಕಪ್ಪು-ಛಾಯೆಯೇ ತಾಂಡವವಾಡುತ್ತದೆ. ಮತ ಚಲಾವಣೆಯಲ್ಲಿ ಮೋಸ, ಮತ ಪೆಟ್ಟಿಗೆಗಳನ್ನೇ ಹೊತ್ತೊಯ್ಯುವ ದುರಾಚಾರ, ಅಭ್ಯರ್ಥಿಗಳನ್ನೇ ಅಪಹರಿಸುವಂತಹ ಕೀಳು ಮಟ್ಟದ ಸ್ಪರ್ಧೆ ಸಾಗುತ್ತಿದೆ.
ಚುನಾವಣೆಯ ಈ ಎಲ್ಲಾ ದೋಷಗಳನ್ನು ಸರಿಪಡಿಸಲೇಬೇಕಾದ ಅಂತಿಮ ಘಟ್ಟ ತಲುಪಿಬಿಟ್ಟಿದ್ದೇವೆ. ನೈತಿಕ ನೆಲೆಗಳನ್ನು ಭದ್ರ ಪಡಿಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ.ಇನ್ನಷ್ಟು ಬಲವಾದ ಕಾನೂನು ರೂಪಿತವಾಗಬೇಕು. ಚುವಾವಣೆಗಳು ನಿಜಾರ್ಥದಲ್ಲಿ, ಉತ್ಸವವಾಗಿ, ಭಾರತಕ್ಕೆ ಭವ್ಯ ಭವಿಷ್ಯ ನೀಡುವ ಹಬ್ಬವಾಗಲೆಂದು ಆಶಿಸೋಣ.

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now